ಫೋಟೊಗ್ರಾಫಿಕ್ ಎಮಲ್ಯನ್ - 
ಸಿಲ್ವರ್ ಹ್ಯಾಲೈಡ್ (ಕ್ಲೋರೈಡ್, ಬ್ರೋಮೈಡ್ ಇತ್ಯಾದಿ) ಹರಳುಗಳನ್ನು ಜೆಲಾಟಿನ್ನಿನಲ್ಲಿ ತೇಲಾಡಿಸಿದಾಗ ಉಂಟಾಗುವ ಎಮಲ್ಯನ್, ಛಾಯಾಚಿತ್ರೀಕರಣದಲ್ಲಿ ಬಳಸುವ ರಾಸಾಯನಿಕ ಮಿಶ್ರಣ. ಚಿತ್ರೀಕರಣದ ವೇಗ, ಚಿತ್ರದ ಹದ (ಟೋನ್), ಕಾಂತಿಭೇದ ಅಥವಾ ವೈದೃಶ್ಯ (ಕಾಂಟ್ರಾಸ್ಟ್), ಸ್ಥಿರತೆ ಇವನ್ನು ವ್ಯತ್ಯಾಸಗೊಳಿಸುವುದಕ್ಕೆ, ಜಿಲಾಟಿನ್ನನ್ನು ಬಿರುಸುಗೊಳಿಸುವುದಕ್ಕೆ ಹಾಗೂ ಎಮಲ್ಯನ್ನನ್ನು ಗೊತ್ತಾದ ಅಲೆಯುದ್ದಗಳುಳ್ಳ ಬೆಳಕಿನ ಕ್ರಿಯೆಗೆ ಸೂಕ್ಷ್ಮ ಪರಿಣಾಮ ಉಂಟಾಗುವಂತೆ ಮಾಡುವುದಕ್ಕೆ ಅನೇಕ ವಿಧವಾದ ರಾಸಾಯನಿಕ ವಸ್ತುಗಳನ್ನು ಇದರೊಂದಿಗೆ ಬೆರೆಸಲಾಗುತ್ತದೆ. ಅನಂತರ ಇದನ್ನು ಯುಕ್ತವಾದ ಆಧಾರ ಮೇಲ್ಮೈಯ ಮೇಲೆ ಲೇಪಿಸಿ ಶೀತಲೀಕರಿಸುವುದರ ಮೂಲಕ ಎಮಲ್ಯನ್ ಗಟ್ಟಿಯಾಗುವಂತೆ ಮಾಡಿ ಇದರಲ್ಲಿರುವ ತೇವಾಂಶ ನಿರ್ದಿಷ್ಟ ಪರಿಮಾಣಹೊಂದುವಂತೆ ಒಣಗಿಸಲಾಗುತ್ತದೆ. ಕೆಲವು ಫೋಟೊಗ್ರಾಫಿಕ್ ಪೊರೆಗಳಲ್ಲಿ ಮತ್ತು ಅನೇಕ ಫಲಕಗಳಲ್ಲಿ ಒಂದರ ಮೇಲೊಂದರಂತೆ ಅನೇಕ ಲೇಪನಗಳನ್ನು ಮಾಡಲಾಗುತ್ತದೆ. ಇವುಗಳಲ್ಲಿ ಪ್ರತಿಯೊಂದು ಲೇಪನದ ದಪ್ಪವೂ ಸುಮಾರು 0.00058 ಸೆಂಮೀನಷ್ಟು ಇರುವುದು. ಎಕ್ಸ್‍ಕಿರಣಗಳಿಗಾಗಿ ಬಳಸುವ ಪೊರೆಗಳಲ್ಲಿ (ಫಿಲ್ಮ್ಸ್) ಎರಡು ಪಾಶ್ರ್ವಗಳಲ್ಲೂ ಎಮಲ್ಯನ್ನನ್ನು ಲೇಪಿಸಿದ್ದರೆ ವರ್ಣ ಪೊರೆಗಳಲ್ಲಿ ಆರಕ್ಕೂ ಹೆಚ್ಚು ಪದರಗಳನ್ನು ಲೇಪಿಸಿರುತ್ತದೆ. ಎಮಲ್ಯನ್ನಿನ ಮೇಲೆ ಬೆಳಕಿನಿಂದ ಪರಿಣಾಮಗೊಳ್ಳದಿರುವ ಒಂದು ಪದರವನ್ನೂ ಲೇಪಿಸಿರುತ್ತದೆ. ಇದು ಮಿಕ್ಕ ಭಾಗಗಳನ್ನು ರಕ್ಷಿಸಲು ಸಹಾಯಕ. ಪೊರೆಗಳ ಸುರುಳಿಗಳ ಹಿಂಬದಿಯಲ್ಲಿ ಕೂಡ ಜಿಲಾಟಿನ್ನಿನ ಪದರ ಉಂಟು. ಫೋಟೊಗ್ರಾಫಿಕ್ ಕಾಗದಗಳ ಮೇಲೆ ಲೇಪಿಸುವ ಎಮಲ್ಯನ್ನಿನ ಪದರ ತೆಳುವಾಗಿರುತ್ತದೆ. ಇದನ್ನು ಪೊರೆಗಳಲ್ಲಿ ಇರುವುದಕ್ಕಿಂತ ಜಾಸ್ತಿ ಬಿರುಸು ಮಾಡಿರುತ್ತದೆ. ಅತಿಸೂಕ್ಷ್ಮ ಋಣಾತ್ಮಕಗಳ (ನೆಗೆಟಿವ್ಸ್) ತಯಾರಿಕೆಯಲ್ಲಿ ಸಿಲ್ವರ್ ಬ್ರೋಮೈಡ್ ಮತ್ತು ಸ್ವಲ್ಪ ಸಿಲ್ವರ್ ಅಯೊಡೈಡನ್ನೂ ಮುದ್ರಣ ಮಾಡಲು ಬಳಸುವ ಮಂದಗತಿಯ ಎಮಲ್ಯನ್ನುಗಳಲ್ಲಿ ಸಿಲ್ವರ್ ಕ್ಲೋರೈಡನ್ನೂ ಉಪಯೋಗಿಸಲಾಗುವುದು. 

	ಛಾಯಾಚಿತ್ರ ಪೊರೆಯನ್ನು ಬೆಳಕಿಗೆ ಒಡ್ಡಿದ ಬಳಿಕ ಪ್ರಸ್ಫುಟನೆ (ಡಿವೆಲಪ್‍ಮೆಂಟ್) ಮತ್ತು ಸ್ಥಾಯೀಕರಣ (ಫಿಕ್ಸಿಂಗ್) ಎಂಬ ರಾಸಾಯನಿಕ ಕ್ರಿಯೆಗಳಿಗೆ ಒಳಪಡಿಸಿ ತೊಳೆಯಲಾಗುವುದು. ಆಗ ಅದರ ಮೇಲೆ ಛಾಯಾಚಿತ್ರ ರೂಪುಗೊಂಡಿರುತ್ತದೆ. ವರ್ಣಛಾಯಾಚಿತ್ರದ ಪ್ರಸ್ಫುಟನ ಕ್ರಿಯೆಯಲ್ಲಿ ರಂಜಕ (ಡೈ) ಎಂಬ ವರ್ಣೋತ್ಪಾದಕ ಅಣುಪುಂಜಗಳೂ ಉಂಟಾಗುತ್ತವೆ. ಪೊರೆಗಳಲ್ಲಿ ಜಿಲಾಟಿನ್ ಬದಲು ಕಲೋಡಿಯಾನ್, ಸೆಲ್ಯುಲೋಸ್, ನೈಟ್ರೇಟ್, ಇತ್ಯಾದಿ ರಾಸಾಯನಿಕ ವಸ್ತುಗಳನ್ನೂ ಪೊರೆಗೆ ಆಧಾರವಾಗಿ ಪಾರಕ ಪದಾರ್ಥಗಳಾದ ಸೆಲ್ಯುಲೋಸ್ ಅಸಿಟೇಟ್, ಪಾಲೆಸ್ಟೈರೀನ್ ಇತ್ಯಾದಿ ರಾಸಾಯನಿಕ ವಸ್ತುಗಳನ್ನೂ ಉಪಯೋಗಿಸಲಾಗುತ್ತದೆ. 

	ಫೋಟೊಗ್ರಾಫಿಕ್ ಎಮಲ್ಯನ್ ವಿಧಾನ ಪರಮಾಣುವಿಜ್ಞಾನದಲ್ಲಿ ಬಳಸಲಾಗುವ ವಿಧಾನ. ಗಾಜಿನ ಫಲಕದ ಮೇಲೆ ಇದಕ್ಕಾಗಿಯೇ ವಿಶೇಷವಾಗಿ ತಯಾರಿಸಲಾದ ಫೋಟೊಗ್ರಾಫಿಕ್ ಎಮಲ್ಯನ್ನನ್ನು ಲೇಪಿಸಲಾಗಿರುತ್ತದೆ. ಋಣ ಅಥವಾ ಧನ ಕಣಗಳು ಇದರ ಮೂಲಕ ಹಾಯ್ದುಹೋದಾಗ ಆ ಚಲನೆಯಿಂದ ಬೆಳಕು ಹಾದು ಹೋದಾಗ ಆಗುವಂಥದೇ ಪರಿಣಾಮವುಂಟಾಗಿ ಕಣ ಹಾದುಹೋದ ಜಾಡು ಕಾಣುವಂತಾಗುತ್ತದೆ. ಇದರಿಂದ ಎಮಲ್ಯನ್ನಿನಲ್ಲಿ ಶಾಶ್ವತ ದಾಖಲೆ ಏರ್ಪಡುತ್ತದೆ. ಅದನ್ನು ಸಾವಕಾಶವಾಗಿ ಅಧ್ಯಯನಮಾಡಬಹುದು. ಈ ದಾಖಲೆ ಸೂಕ್ಷ್ಮರೂಪದ್ದಾಗಿದ್ದು ಅದನ್ನು ವಿವರವಾಗಿ ಪರೀಕ್ಷಿಸಲು ಸೂಕ್ಷ್ಮದರ್ಶಕ ಅಗತ್ಯ. ಎಮಲ್ಯನ್ ವಿಧಾನವನ್ನು ವಿಶ್ವಕಿರಣಗಳ ಸಂಶೋಧನೆಯಲ್ಲಿಯೂ ಅತ್ಯಂತ ಶಕ್ತಿಯುತ ಪರಮಾಣು ಕಣಗಳ ಬಗೆಗಿನ ಸಂಶೋಧನೆಯಲ್ಲಿಯೂ ಉಪಯೋಗಿಸುತ್ತಾರೆ. ವಿಕಿರಣ ಪಟುತ್ವವನ್ನಾದರೂ ಧಾತುವಿನಿಂದ ಉತ್ಸರ್ಜಿಸಿದ ವಿಕಿರಣಗಳು ಛಾಯಾಚಿತ್ರ ಫಲಕದ ಮೇಲೆ ಉಂಟುಮಾಡಿದ ಪ್ರಭಾವದಿಂದ ಪತ್ತೆಹಚ್ಚಲಾಯಿತು (1896). 

ಫಲಕದಲ್ಲಿ ಪರಮಾಣುಕಣ ರೇಖಿಸಿದ ಜಾಡಿನಲ್ಲಿ ಕಂಡುಬರುವ ಸಾಂದ್ರತೆ ಕಣದ ಅಯಾನಿಕರಣಶಕ್ತಿ ನಷ್ಟದ ಪರಿಮಾಣವನ್ನು ಅವಲಂಬಿಸಿದೆ. ಆದ್ದರಿಂದ ಜಾಡಿನ ಒಂದು ಉದ್ದದ ಮಾನದಲ್ಲಿ ಪರಮಾಣುವಿನ ಪರಿಣಾಮಕ್ಕೆ ಒಳಗಾಗಿರುವ ಫೋಟೊಗ್ರಾಫಿಕ್ ಕಣಗಳ ಸಂಖ್ಯೆಯನ್ನು ಎಣಿಸುವುದರ ಮೂಲಕ ಈ ಶಕ್ತಿನಷ್ಟವನ್ನು ಅಳೆಯಬಹುದು. ಪರಮಾಣು ಕಣ ಎಮಲ್ಯನ್ನಿನಲ್ಲೇ ಸಂಪೂರ್ಣವಾಗಿ ಶಕ್ತಿ ನಷ್ಟಗೊಂಡು ನಿಲ್ಲಿಸಲ್ಪಟ್ಟರೆ ಅದರ ವ್ಯಾಪ್ತಿಯನ್ನು ತಿಳಿಯಬಹುದು. ಪರಮಾಣು ಕಣಗಳ ಚದರಿಕೆಯನ್ನು ಎಮಲ್ಯನ್ನಿನಲ್ಲಿ ಕಂಡುಬರುವ ಜಾಡು ಸರಳ ರೇಖೆಯಿಂದ ದಿಕ್ಚ್ಯುತಿಗೊಂಡಿರುವ ಮೊತ್ತ ಅಳೆದು ಅಧ್ಯಯನ ಮಾಡಬಹುದು. ಪರಮಾಣು ತೂಕ, ವೈದ್ಯತಗುಣ ಮತ್ತು ಶಕ್ತಿ ಇವನ್ನು ಹೀಗೆ ಅಳೆದು ತನ್ಮೂಲಕ ಪರಮಾಣುವಿನ ಪೂರ್ಣಚಿತ್ರ ಪಡೆಯಬಹುದು. ಈ ತೆರನಾದ ಸಂಶೋಧನೆಯಿಂದಲೇ ಹೈಡ್ರೊಜನ್ ಪರಮಾಣುವಿಗಿಂತ ಹೆಚ್ಚಿನ ತೂಕದ ಪರಮಾಣುಗಳನ್ನು ಮೊತ್ತಮೊದಲಿಗೆ ಪತ್ತೆಹಚ್ಚಲಾಯಿತು. ಕೆಲವು ಸಲ ವಿಶ್ವಕಿರಣ ಮತ್ತು ಎಮಲ್ಯನ್ನಿನಲ್ಲಿರುವ ಪದಾರ್ಥ ಇವುಗಳ ನಡುವೆ ನಡೆಯುವ ಕ್ರಿಯೆಯಿಂದಾಗಿ ನಕ್ಷತ್ರದೋಪಾದಿಯ ಜಾಡುಗಳು ಉಂಟಾಗುತ್ತವೆ. ಇಂಥ ಒಂದು ನಕ್ಷತ್ರಕೇಂದ್ರ ಬಿಂದುವಿನಿಂದ ದ್ವಿತೀಯಕ ಕಣಗಳು ಉತ್ಪಾದಿಸಲ್ಪಡುತ್ತವೆ. ಮೆಸಾನ್ ಎಂಬ ಕಣ (-ಮೆಸಾನ್ ಎಂಬ ಕಣವಾಗಿ ಪರಿವರ್ತನೆಗೊಂಡು, ಕೊನೆಗೆ ಎಲೆಕ್ಟ್ರಾನುಗಳಾಗಿ ಪರ್ಯವಸಾನಗೊಳ್ಳುವುದನ್ನು ಫೋಟೊಗ್ರಾಫಿಕ್ ಎಮಲ್ಯನ್ ವಿಧಾನದಿಂದಲೇ ಶೋಧಿಸಲಾಯಿತು. ಕಬ್ಬಿಣ ಮುಂತಾದ ತೂಕದ ಪರಮಾಣುಗಳು ಪ್ರಾಥಮಿಕ ವಿಶ್ವಕಿರಣಗಳಲ್ಲಿರುವುದನ್ನೂ ಎಮಲ್ಯನ್ ವಿಧಾನದಿಂದಲೇ ಶೋಧಿಸಲಾಗಿದೆ.
(ಎನ್.ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ